ಫ್ರಾಯ್ಡ್, ಸಿಗ್‍ಮಂಡ್
	1856-1939. ಪ್ರಪಂಚವಿಖ್ಯಾತ ಮನೋವಿಜ್ಞಾನಿ. ಮನಸ್ಸಿನ ಸಂಬಂಧಪಟ್ಟ ಅನೇಕ ರೋಗಗಳನ್ನು ಮನೋವಿಶ್ಲೇಷಣೆಯ ಮೂಲಕ ಗುಣಪಡಿಸಬಹುದೆಂದು ತೋರಿಸಿಕೊಟ್ಟಾತ. ವ್ಯಕ್ತಿಯ ಸಾಮಾನ್ಯ ಹಾಗೂ ಅಸಾಮಾನ್ಯ ನಡವಳಿಕೆಗಳಿಗೆ ಅವನ ಸುಪ್ತಮನಸ್ಸೇ ಕಾರಣವೆಂದು ಹೇಳಿದಾತ. ಮನುಕುಲವನ್ನು ಅರ್ಥ ಮಾಡಿಕೊಳ್ಳುವಲ್ಲಿ ತನ್ನ ಸಿದ್ಧಾಂತದ ಮೂಲಕ ಹೊಸ ಆಯಾಮವನ್ನು ಸೃಷ್ಟಿಸಿದಾತ.

	ಫ್ರಾಯ್ಡ್ 1856 ಮೇ 6ರಂದು ಫ್ರೈಬುರ್ಗ್ ಎಂಬಲ್ಲಿ ಜನಿಸಿದ. ಇವನ ತಂದೆ ಜೇಕಬ್ ಫ್ರಾಯ್ಡ್ ಮಧ್ಯಮವರ್ಗಕ್ಕೆ ಸೇರಿದ ಒಬ್ಬ ವ್ಯಾಪಾರಿ. ಇವನ ತಾಯಿ ಅಮೇಲಿಯ ನಾಥನ್‍ಸಸ್ ಜೇಕಬ್ ಫ್ರಾಯ್ಡನ ಮೂರನೆಯ ಹೆಂಡತಿ. ಈಕೆ ಸುಂದರಿಯೂ ಸೂಕ್ಷ್ಮ ಮನಸ್ಸಿನವಳೂ ಬುದ್ಧಿಸಂಪನ್ನೆಯೂ ಆಗಿದ್ದಳು.

	ಫ್ರಾಯ್ಡನ ಬಾಲ್ಯದ ಕೆಲವು ಅನುಭವಗಳು ಮುಂದೆ ಇವನ ಮನೋ ವಿಶ್ಲೇಷಣಾ ಸಿದ್ಧಾಂತದ ನಿರೂಪಣೆಗೆ ಆಧಾರವಾದುವು. ಫ್ರಾಯ್ಡ್‍ನಿಗೆ ಇಮ್ಯಾನುಅಲ್ ಎಂಬ ಬಲ ಅಣ್ಣನೊಬ್ಬನಿದ್ದ. ಅವನ ಮಗ ಜಾನ್ ಎಂಬಾತ ಫ್ರಾಯ್ಡನ ಒಡನಾಡಿ. ಈತನೊಂದಿಗೆ ಫ್ರಾಯ್ಡ್ ತನ್ನ ಆಟದ ಸಾಮಾನುಗಳನ್ನು ಹಂಚಿಕೊಳ್ಳುತ್ತಿದ್ದ. ಜತೆಯಲ್ಲಿ ಆಡುತ್ತಿದ್ದ, ಜಗಳವಾಡುತ್ತಲಿದ್ದ. ಒಬ್ಬನೇ ವ್ಯಕ್ತಿಯಲ್ಲಿ ಈ ಸ್ನೇಹವೈರಗಳೆರಡೂ ಒಂದುಗೂಡಿರುವ ಬಗೆಯನ್ನು ಮುಂದೆ ಇನ್ನೂ ಅನೇಕ ಜನರಲ್ಲಿ ಫ್ರಾಯ್ಡ್ ಕಂಡ. ತನ್ನ ಸ್ವಂತ ಕನಸುಗಳನ್ನು ವಿವರಿಸುವಾಗಲೂ ಜೊತೆಗೆ ತನ್ನ ಸಹವರ್ತಿಗಳು, ಸಹಚರರು ಮತ್ತು ಇರತರೊಡನೆ ತನಗಿರುವ ಸಂಬಂಧವನ್ನು ಕುರಿತು ಚರ್ಚಿಸುವಾಗಲೂ ಫ್ರಾಯ್ಡ್ ಇಂಥ ಘಟನೆಗಳನ್ನು ಅನೇಕ ಬಾರಿ ಸ್ಮರಿಸಿದ್ದಾನೆ. ಫ್ರಾಯ್ಡ್ ತನ್ನ ಎಳೆತನದ ದಿವಸಗಳನ್ನು ಕುರಿತು ಬರೆಯುವಾಗ, ತನ್ನ ತಾಯಿ ತನ್ನನ್ನು ತುಂಬ ಪ್ರೀತಿಯಿಂದ ಕಾಣುತ್ತಿದ್ದಳೆಂದೂ ತಾನು ಬಯಸುತ್ತಿದ್ದುದನ್ನೆಲ್ಲ ಸಲ್ಲಿಸುತ್ತಿದ್ದಳೆಂದೊ ತನ್ನನ್ನು ಬಲು ಅಕ್ಕರೆಯಿಂದ ಸಾಕುತ್ತಿದ್ದಳೆಂದೂ ಹೇಳಿಕೊಂಡಿದ್ದಾನೆ. ಆದರೆ ಈತನ ತಂದೆ ಬೇರೆ ತೆರದವ. ಫ್ರಾಯ್ಡ ಹುಟ್ಟಿದ್ದಾಗ ತಂದೆಗೆ 41 ವರ್ಷ. ಆ ವೇಳೆಗಾಗಲೆ ಅವನಿಗೆ ವಯಸ್ಸಿಗೆ ಬಂದ, ಮದುವೆಯಾಗಿದ್ದ ಒಬ್ಬ ಮಗನಿದ್ದನಲ್ಲದೆ ಒಬ್ಬ ಮೊಮ್ಮಗನೂ ಇದ್ದ. ತಂದೆಗೆ ಅಧಿಕಾರವನ್ನು ಚಲಾಯಿಸುವುದರಲ್ಲಿ ಆಸೆ. ತನ್ನ ತಂದೆಯ ದರ್ಪ ಮತ್ತು ತನ್ನ ಮೇಲೆ ಆತನ ಅಪ್ರತಿಹತನಾದ ಅಧಿಕಾರ, ಇಂಥ ಅನುಭವಗಳು, ಈತನ ಬಾಳಿನುದ್ದಕ್ಕೂ ನೆನಪಿನಲ್ಲಿ ಉಳಿದು ಬಂದವು.

	ಫ್ರಾಯ್ಡ್ ಎರಡೂವರೆ ವರುಷದ ಮಗುವಾಗಿದ್ದಾಗ ಅನ್ನಾ ಎಂಬ ತಂಗಿ ಹುಟ್ಟಿದಳು. ಇದು ಈತನಿಗೊಂದು ಒಗಟಾಯಿತು. ಹೊಸದಾಗಿ ಹುಟ್ಟಿದ ಕೂಸು ತನ್ನ ತಾಯಿಯ ಗಮನವನ್ನು ತನ್ನತ್ತಲಿಂದ ಅದರೆಡೆಗೆ ಸೆಳೆದುಕೊಂಡದ್ದರಿಂದ ಇವನ ಮನಸ್ಸಿಗೆ ಸ್ವಲ್ಪ ಕಸಿವಿಸಿಯೂ ಆಯಿತು. ತನ್ನ ಕುಟುಂಬದ ಈ ಪರಿಸ್ಥಿತಿ ತನ್ನ ಬೆಳವಣಿಗೆಯನ್ನೂ ಶೀಲ ಸ್ವಭಾವಗಳನ್ನೂ ಹೇಗೆ ಗೊತ್ತುಪಡಿಸಿತು ಎಂಬುದನ್ನು ಮುಂದೆ ಫ್ರಾಯ್ಡ್ ನಿರೂಪಿಸಿದ. ಫ್ರಾಯ್ಡ್ ಮೂರುವರ್ಷದವನಾಗಿದ್ದಾಗ ಫ್ರೈಬುರ್ಗಿನಲ್ಲಿ ಇವನ ತಂದೆಗೆ ಜೀವನ ನಡೆಸುವುದೇ ಕಷ್ಟವಾಯಿತು. ಅಲ್ಲಿ ವಸ್ತುತಃ ಯೆಹೂದ್ಯರ ಸ್ವತ್ತಿಗೂ ಪ್ರಾಣಕ್ಕೂ ಅಪಾಯವಿಲ್ಲದಿದ್ದರೂ ಅವರನ್ನು ಕಂಡರೆ ದ್ವೇಷ ದೃಢವಾಗಿ ಹಬ್ಬುತ್ತಿತ್ತು. ಇದರಿಂದಾಗಿ ಫ್ರಾಯ್ಡ್ ಕುಟುಂಬ ಲೈಪ್‍ಜಿûಗ್ ಎಂಬ ಪಟ್ಟಣಕ್ಕೆ ವಲಸೆ ಹೋಗಿ ಅಲ್ಲಿ ಒಂದು ವರ್ಷಕಾಲ ತಂಗಿತು. ಪುನಃ ಅದು ಅಲ್ಲಿಂದ ವಿಯನ್ನಾಕ್ಕೆ ವಲಸೆ ಹೋಯಿತು. 1939ರಲ್ಲಿ ಇಂಗ್ಲೆಂಡಿಗೆ ವಲಸೆ ಹೋಗುವ ತನಕವೂ ಫ್ರಾಯ್ಡ್ ಸುಮಾರು 80 ವರ್ಷಗಳ ಕಾಲ ಇಲ್ಲಿ ನೆಲಸಿದ್ದ.

	ಒಂಬತ್ತನೆಯ ವಯಸ್ಸಿನಲ್ಲಿ ಫ್ರಾಯ್ಡ್ ಸ್ಟೈರಲ್ ಜಿಮ್ನೇಸಿಯಮಿಗೆ (ಪ್ರೌಢಶಾಲೆಗೆ) ಸೇರಿದ. ಈತನಿಗೆ ಅದ್ಭುತವಾದ ಸ್ಮøತಿಶಕ್ತಿಯಿತ್ತು. ಕೇಳಿದ, ಓದಿದ ಯಾವುದೇ ಸಂಗತಿಯನ್ನು ಯಥಾವತ್ತಾಗಿ ಪುನರುಚ್ಚರಿಸುತ್ತಿದ್ದ. ಶ್ರೇಷ್ಠ ದರ್ಜೆಯಲ್ಲಿ ಪ್ರೌಢ ವಿದ್ಯಾಭ್ಯಾಸ ಮುಗಿಸಿದ ಅನಂತರ ವೈದ್ಯಕೀಯ ಅಭ್ಯಾಸ ನಡೆಸಲು ಮನಸು ಮಾಡಿದ್ದ. ಆದರೆ ಇದರಲ್ಲಿ ಈತನಿಗೆ ಮನಃಪೂರ್ವಕ ಆಸಕ್ತಿ ಏನೂ ಇರಲಿಲ್ಲ. ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕೆಂಬ ಬಯಕೆ ಹಾಗೂ ಪ್ರಕೃತಿ ವಿಜ್ಞಾನದ ಪರಿಚಯ ಪಡೆಯಬೇಕೆಂಬ ಆಕಾಂಕ್ಷೆ ಈತನ ವೈದ್ಯಕೀಯ ಅಭ್ಯಾಸಕ್ಕೆ ಕಾರಣವಾದುವು. ವೈದ್ಯಕೀಯ ವ್ಯಾಸಂಗ ಮುಗಿಸಲು ಈತ ಎಂಟು ವರ್ಷ ತೆಗೆದುಕೊಂಡ. ಮೊದಲು ಅಂಗರಚನಾ ವಿಜ್ಞಾನದಲ್ಲೂ ಬಳಿಕ ನರಮಂಡಲದ ವಿಜ್ಞಾನದಲ್ಲೂ ತುಂಬ ಆಸಕ್ತಿ ವಹಿಸಿದ. ಎಷ್ಟೇ ಕಷ್ಟಪಟ್ಟು ವ್ಯಾಸಂಗ ಮಾಡಿದ್ದರೂ ತುಂಬ ಬುದ್ಧಿವಂತನಾಗಿದ್ದರೂ ಈತನಿಗೆ ಎಲ್ಲೂ ಕೆಲಸ ದೊರೆಯಲಿಲ್ಲ. ಹೀಗಾಗಿ ಇವನ ಉಪಾಧ್ಯಾಯ ಇವನಿಗೆ ಬೇರೊಂದು ಕೆಲಸ ಕಲಿಯುವಂತೆ ಹೇಳಿದ. ಫ್ರ್ರಾಯ್ಡ್ ಮನಸ್ಸಿಲ್ಲದೆ ಅದಕ್ಕೆ ಒಪ್ಪಿಕೊಂಡ. ಆಗ ಫ್ರಾಯ್ಡ್ ಮಾನವನ ನರಮಂಡಲ ಕೇಂದ್ರದ ವ್ಯಾಸಂಗದಲ್ಲಿ, ಅದರಲ್ಲೂ ಮೆಡುಲ್ಲ ಅಬ್ಲಾಂಗೇಟ ಅಥವಾ ಮೇರುಶೀರ್ಷದ ವ್ಯಾಸಂಗದಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಿದ. ನರ ಸಂಬಂಧವಾದ ರೋಗಗಳ ವಿಷಯದಲ್ಲಿ ಈತನ ಆಸಕ್ತಿ ಕೆರಳಿತು. ಆದರೆ ಈ ವಿಷಯದಲ್ಲಿ ಇವನಿಗೆ ದಾರಿ ತೋರಲು ಆ ಸುತ್ತಿನಲ್ಲಿ ಯಾರೂ ಇರಲಿಲ್ಲ. ಪ್ಯಾರಿಸ್ಸಿನಲ್ಲಿ ಚಾರ್‍ಕಾಟ್ ಎಂಬಾತನಿರುವುದು ಇವನಿಗೆ ಕರ್ಣಾಕರ್ಣಿಕೆಯಾಗಿ ತಿಳಿದಿತ್ತು. ಆ ಕಾಲದಲ್ಲಿ ಚಾರ್‍ಕಾಟ್ ಮನೋರೋಗ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಪ್ರಯೋಗ ಮತ್ತು ತಿಳಿವಳಿಕೆಗೆ ಹೆಸರುವಾಸಿಯಾಗಿದ್ದ. ಫ್ರಾಯ್ಡ್ ಮೆಡಲ್ಲದ ಮೇಲೆ ತನ್ನ ವ್ಯಾಂಸಗವನ್ನು ಹೇಗೋ ಮುಂದುವರಿಸಿ ನರಮಂಡಲದ ಆಂಗಿಕ ಜಾಡ್ಯಗಳ ಮೇಲೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದ. ಈತನ ಯಶಸ್ಸು ಹರಡಿತು. ಪ್ರೇರಿತ ನಿದ್ರೆಯನ್ನು ಒಂದು ವಿಧಾನವಾಗಿ ಬಳಸುತ್ತಿದ್ದ ಚಾರ್‍ಕಾಟನ ಪ್ರಕ್ರಿಯೆಗಳನ್ನು ಕಲಿಯಲು ಈತನಿಗೆ ಶಿಷ್ಯವೇತನ ದೊರೆಯಿತು. ಇದರಿಂದಾಗಿ ಚಾರ್‍ಕಾಟ್ ಸನಿಹದಲ್ಲಿ ಮಾತನಾಡಲು ಫ್ರಾಯ್ಡನಿಗೆ ಅವಕಾಶ ಸಿಕ್ಕಿತು. ಚಾರ್‍ಕಾಟ್‍ನ ವಿಚಾರಪರತೆ ಮತ್ತು ಕ್ರಮಬದ್ಧ ಪ್ರಕ್ರಿಯೆಗಳ ಜೊತೆಗೆ ಆತನ ವ್ಯಕ್ತಿತ್ವ ಸಹ ಫ್ರಾಯ್ಡನ ಚಿತ್ತವನ್ನು ಸೆಳೆದುವು. ಚಾರ್‍ಕಾಟ್ ತನ್ನ ಸಿದ್ಧಾಂತಗಳಿಗೆ ಎಲ್ಲ ಸಂದರ್ಭಗಳಲ್ಲೂ ಪ್ರಾಯೋಗಿಕ ರುಜುವಾತುಗಳನ್ನು ಕೊಡುತ್ತಿರಲಿಲ್ಲ. ಹೀಗೆಂದು ಆತ ಹೇಳುತ್ತಲೂ ಇದ್ದ. ಮುಂದೆ ಫ್ರಾಯ್ಡ್ ತಾನು ಟೀಕೆಗೊಳಗಾದಾಗ ಈ ಸಂಗತಿಯನ್ನು ಪದೇಪದೇ ಹೇಳುತ್ತಿದ.

	ಫ್ರಾಯ್ಡ್ 1886ರಲ್ಲಿ ಮಾರ್ಥ ಬೆರ್‍ನೇಸ್ ಎಂಬಾಕೆಯನ್ನು ಮದುವೆ ಮಾಡಿಕೊಂಡ. ಅದಕ್ಕೂ ಮುನ್ನ ಆಕೆಯೊಡನೆ ನಾಲ್ಕು ವರ್ಷಗಳ ಪ್ರಣಯ ಜೀವನ ನಡೆಸಿದ್ದ. ಇವರಿಗೆ ಮೂರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು ಜನಿಸಿದರು. ಮುಂದೆ ಅನ್ನಾಫ್ರಾಯ್ಡ್ ಎಂಬ ಒಬ್ಬ ಮಗಳು ಮನೋವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ದಳಾದಳು.

	ಫ್ರಾಯ್ಡ್‍ನಿಗೆ ವೈದ್ಯಕೀಯ ವೃತ್ತಿಯಲ್ಲಿ ಅಷ್ಟಾಗಿ ಯಶಸ್ಸು ದೊರೆಯಲಿಲ್ಲ. ಈತನನ್ನು ಜನ ಜರಿದರು, ಉದಾಸೀನವಾಗಿ ಕಂಡರು ಕೆಲವೊಮ್ಮೆ ತಿರಸ್ಕರಿಸಿದರು. ಪ್ರೇರಿತನಿದ್ರೆ ಪೌರುಷಹೀನತ್ವವನ್ನು ಕೃತಕವಾಗಿ ಉತ್ಪಾದಿಸುವ ವಿಧಾನವೇ ಹೊರತು ಮತ್ತೆ ಬೇರೆಯಲ್ಲ ಎಂಬ ಕಾರಣದಿಂದ ಈ ಹಿಂದೆ ಈತನಿಗೆ ಸೆರೆಬ್ರಲ್ ಅನಾಟಮಿ ಇನ್‍ಸ್ಟಿಟ್ಯೂಟಿನಲ್ಲಿ ಆಶ್ರಯದಾತನಾಗಿದ್ದ ಮೆಯ್‍ಟನರ್ ಎಂಬಾತ ಫ್ರಾಯ್ಡ್‍ನನ್ನು ತನ್ನ ಪ್ರಯೋಗಶಾಲೆಯಿಂದ ಹೊರಗಿಟ್ಟ. ತನ್ನ ಸಹವೃತ್ತಿಯವರು ತೋರುತ್ತಿದ್ದ ಇಂಥ ತಿರಸ್ಕಾರ ಪರಿಹಾಸ್ಯಗಳಿಗೆ ಈಡಾದರೂ ಫಾಯ್ಡ್ ತಾನು ಪ್ರಯೋಗಿಸುತ್ತಿದ್ದ ಪ್ರೇರಿತನಿದ್ರಾವಿಧಾನದಲ್ಲಿ ಜಯಶಾಲಿಯಾಗಿದ್ದ. ಈತನ ಯಶಸ್ಸು ಹರಡಿತು, ಪವಾಡ ಪುರುಷನೆಂಬ ಖ್ಯಾತಿ ಸಹ ಬಂತು. ನರರೋಗಿಗಳು ಈತನ ಕಾರ್ಯಾಲಯವನ್ನು ಮುತ್ತಿಕೊಳ್ಳುತ್ತಿದ್ದರು. ಪ್ರೇರಿತನಿದ್ರೆಯನ್ನೂ ಸೂಚನೆಯನ್ನೂ ಒಟ್ಟಿಗೆಯೋ ಅಥವಾ ಒಂದೊಂದಾಗಿಯೋ ಫ್ರಾಯ್ಡ್ ಬಳಸಿ ತುಂಬ ಜಯಶಾಲಿಯಾದ.

	ಅನೇಕ ವಿಷಯಗಳು ಒಂದಾದ ಮೇಲೊಂದು ಫಾಯ್ಡ್‍ನ ಮನಸ್ಸಿಗೆ ಬಂದು ಅಲ್ಲಿ ಬೆಳೆದು ತಮ್ಮ ಮುದ್ರೆಯನ್ನು ಒತ್ತುತ್ತಿದ್ದುವು. ತನ್ನ ರೋಗಿಯ ಮನಸ್ಸಿನಲ್ಲಿ ಆತನಿಗೇ ತಿಳಿಯದ ಹಾಗೆ ಅನೇಕ ವಿಷಯಗಳಿವೆ, ಅವನಿಗೆ ಅವುಗಳ ಅರಿವಿಲ್ಲದಿದ್ದರೂ ಅವು ಆತನ ನಡತೆಯನ್ನು ವರ್ತನೆಯನ್ನೂ ಜೊತೆಗೆ ದುಃಸ್ಥಿತಿಯನ್ನೂ ಪ್ರಭಾವಿಸುತ್ತಿವೆ ಎಂಬ ಭಾವನೆ ಫ್ರ್ರಾಯ್ಡನ ಮನಸ್ಸಿಗೆ ಗೋಚರಿಸಿತು. ನರ ದೌರ್ಬಲ್ಯವುಳ್ಳವನಲ್ಲಿ ಯಾವುದೊ ಒಂದು ನ್ಯೂನತೆ, ಲೈಂಗಿಕವಾದ ಯಾವುದೊ ಒಂದು ತೊಡಕು ಯಾವಾಗಲು ಇದ್ದೇ ಇರುತ್ತವೆ ಎಂಬ ಚಾರ್‍ಕಾಟನ ಮಾತನ್ನು ಕುರಿತು ಈತ ಆಲೋಚಿಸಿದ. ಸೂಚನಾ ವಿಷಯವಾಗಿ ಲೈಬ್ಯುಲ್ಟ್ ಎಂಬಾತನ ಪ್ರಯೋಗ ವಿಧಾನದ ಅಸಮರ್ಪಕತೆ ಮತ್ತು ಪೀಡೆ ಕೂಡ ಈತನ ಆಲೋಚನಾ ವಿಷಯವಾಗಿತ್ತು. ಈಗ ಈ ಸಂಗತಿಗಳೆಲ್ಲವೂ ರೋಗ ನಿಧಾನಗಳನ್ನು ಮತ್ತು ರೋಗದ ನಿಗೂಢ ಮೂಲಸ್ಥಾನಗಳನ್ನು ಕಂಡು ಹಿಡಿಯಲು ಕ್ರಮೇಣ ಫ್ರಾಯ್ಡನಿಗೆ ದಾರಿ ತೋರಿದವು. ಯಾರ ಹತ್ತಿರವಾದರು ತೋಡಿಕೊಂಡರೆ ಮನಸ್ಸಿನ ಭಾರವಿಳಿಯುತ್ತದೆ, ನೋವು ಕಡಿಮೆಯಾಗುತ್ತದೆ ಎಂದು ಒಬ್ಬ ರೋಗಿ ತನಗೆ ಹೇಳಿದ ಮಾತು ಸಹ ಇವುಗಳ ಜೊತೆಗೆ ಬಂದು ಸೇರಿಕೊಂಡಿತು. ಫ್ರಾಯ್ಡ್ ಇವುಗಳಿಂದಲೇ ಕ್ರಮೇಣ ತನ್ನ ಸ್ವೇಚ್ಛಾಸಂಯೋಜನ ವಿಧಾನವನ್ನು ಉಪಕ್ರಮಿಸಿ ಪರಿಪಕ್ವಗೊಳಿಸಿದ ಇದರಲ್ಲಿ ಈತ ರೋಗಿ ತನ್ನ ಮನಸ್ಸಿಗೆ ಯಾವುದು ಬರುತ್ತದೋ ಅದನ್ನು, ಅದು ಅರ್ಥವಿಲ್ಲದ್ದಿರಬಹುದು, ಪ್ರಕೃತೋಚಿತವಾಗಿರಬಹುದು ಅಥವಾ ಲಜ್ಜಾಸ್ಪದಾಗಿರಬಹುದು, ಹೇಗಿದ್ದರೂ ಸರಿಯೆ ಅದು ಇರುವ ಹಾಗೆ ಹೇಳುವಂತೆ ಮಾಡುತ್ತಿದ್ದ. ಈ ಅನುಭವಗಳಿಗೂ ರೋಗಿಯ ಅಸ್ವಸ್ಥತೆಗೂ ಸಂಬಂಧವಿರುವುದನ್ನು ಫ್ರಾಯ್ಡ್ ಕಾಣುತ್ತಿದ್ದ. ಬ್ರಿಯುರ್ ಎಂಬಾತನ ಭಾವರೇಚನ ವಿಧಾನವನ್ನು ಈ ತೆರದಲ್ಲಿ ಬದಲಾಯಿಸುವುದರ ಮೂಲಕ ಅನೇಕ ರೋಗಿಗಳಿಗೆ ಫ್ರಾಯ್ಡ್ ಸಹಾಯಕನಾದ. ಆದರೆ ಮನೋವಿಶ್ಲೇಷಣದ ಪರಿಣತರೂಪ ಯಾವ ಕಷ್ಟಗಳೂ ಇಲ್ಲದೆ ಸುಲಭವಾಗಿ ವಿಕಾಸಗೊಳ್ಳಲಿಲ್ಲ; ಈ ಕಷ್ಟಗಳಲ್ಲಿ ಕೆಲವು ಸ್ವತಃ ತಿಳಿವಳಿಕೆಯನ್ನು ಕೊಡುವಂಥವಾಗಿದ್ದವು. ಇವುಗಳಲ್ಲಿ, ನಡೆದ ಒಂದು ಘಟನೆಯೆಂದರೆ ಒಬ್ಬ ರೋಗಿಷ್ಠ್ಠೆ ಈತನನ್ನು ಆಲಂಗಿಸಲೆಳಸಿದುದು. ಇದಕ್ಕೆ ಪ್ರೇಮವೇ ಕಾರಣವೆಂದೂ ಇದರಿಂದ ವರ್ಗಾವಣೆ ಎಂಬ ಭಾವನೆಯನ್ನು ಆತ ಸಂಪಾದಿಸಿಕೊಂಡ. ಇದರರ್ಥವೇನೆಂದರೆ, ವಿಶ್ಲೇಷಕನ ಮೇಲೆ ರೋಗಿ ಬಲು ಹೆಚ್ಚಾದ ಗೀಳು ಹಚ್ಚಿಕೊಂಡಿರಬಹುದು ಎಂದರೆ ವಿಶ್ಲೇಷಕನಲ್ಲಿ ರೋಗಿ ಪ್ರಣಯಾಸಕ್ತಳಾಗುತ್ತಾಳೆ ಅಥವಾ ದ್ವೇಷ ಬುದ್ಧಿಯನ್ನು ತಳೆಯುತ್ತಾಳೆ ಎಂದು.  ರೋಗಿಯ ಚಿಕಿತ್ಸೆಯಲ್ಲಿ ಒಂದು ಗಮನಾರ್ಹವಾದ ಘಟ್ಟ ವರ್ಗಾವಣೆ ಎಂದು ಫ್ರಾಯ್ಡ್ ಸಿದ್ಧಾಂತಿಸಿದ. ಆದರೆ ವರ್ಗಾವಣೆ ಚಿರಕಾಲನಿಲ್ಲತಕ್ಕ ಸ್ಥಿತಿಗತಿಯಲ್ಲ. ಕುಶಲವಾದ ವಿಶ್ಲೇಷಕ ಅದನ್ನು ತನ್ನಿಂದ ಪ್ರತ್ಯೇಕಿಸಿಕೊಂಡು ತಕ್ಕೆಡೆಗೆ ತಿರುಗಿಸಬಲ್ಲ.

	ಫ್ರಾಯ್ಡ್ ಅನುಭವಿಸಿದ ಎರಡನೆಯ ದೊಡ್ಡತೊಂದರೆ ಎಂದರೆ ಪ್ರತಿಭಟನೆ. ಪ್ರತಿಭಟನೆಯ ಅರ್ಥವೇನೆಂದರೆ, ರೋಗಿಯ ಆಲೋಚನಾಶಕ್ತಿ ನಿರುದ್ಧವಾಗಿದೆ, ಆತ ಇನ್ನಾವ ಸ್ವೇಚ್ಛಾಸಂಯೋಜನೆಗಳನ್ನೂ ಮಾಡಿಕೊಡಲಾರ ಎಂದು. ನೋವು ತನ್ನನ್ನು ಬಾಧಿಸಿದಂತೆ ರೋಗಿ ನೋಡಿಕೊಳುತ್ತಿದ್ದಾನೆ. ವಿಶ್ಲೇಷಕ ನಿಜವಾದ ವ್ರಣವೊಂದನ್ನು ಕೆದಕುತ್ತಿದ್ದಾನೆ ಎಂದು ಇದರ ಅರ್ಥ. ಚಿಕಿತ್ಸೆಯ ಕಾಲದಲ್ಲಿ ಪ್ರತಿಭಟನೆ ಅನೇಕ ಬಾರಿ ಕಾಣಿಸಿಕೊಳ್ಳುತ್ತದೆ. ತನಗೆ ಯಾವುದು ಬಾಧೆ ಕೊಡುತ್ತದೋ ಅದನ್ನು ರೋಗಿ ಹೊರತಂದು ಮುಖಾಮುಖಿಯಾಗಿ ನಿಲ್ಲುವಂತೆ ವಿಶ್ಲೇಷಕ ಪ್ರೋತ್ಸಾಹಿಸುತ್ತಾನೆ. ಇದರ ಗ್ರಹಿಕೆ ಫ್ರಾಯ್ಡನನ್ನು ನಿರೋಧ ಅವರೋಧನ ಎಂಬ ಭಾವನೆಯತ್ತ ಒಯ್ದಿತು. ಇದರರ್ಥವೇನೆಂದರೆ, ಬಾಧೆಯನ್ನು ಕೊಡುವ ಒಂದು ಅನುಭವವನ್ನು ಹೊರಗೆ ನೂಕಿ ಅಲ್ಲಿ ಅದನ್ನು ಬಲವಂತದಿಂದ ಅದುಮಿಡಲಾಗಿದೆ ಎಂದು. ಹೀಗೆ ಅದುಮಿಡಲಾದ ಅನುಭವ ಎಂದಿಗೂ ಭಾವಗುಂಪಿತವಾದ ಬಯಕೆ ಅಥವಾ ಆಕಾಂಕ್ಷೆ. ನಿರೋಧ ಅವರೋಧನ ಸಿದ್ಧಾಂತ ಮನೋವಿಶ್ಲೇಷಣ ಪದ್ಧತಿಯ ಹುರುಳು. ಕಾರ್ಯಶೀಲವೂ ಸ್ಪರ್ಧಿಷ್ಣುವೂ ಆದ ಸುಪ್ತಚೇತನದ ಅಸ್ತಿತ್ವವನ್ನೂ ಜಾಗ್ರದವಸ್ಥೆಯಲ್ಲಿರುವ ಅಹಂ, ಅಹಂಕಾರ ಮತ್ತು ಅಜಾಗ್ರದಾವಸ್ಥೆಯಲ್ಲಿರುವ ಬಯಕೆ ಇವುಗಳ ಹೋರಾಟವನ್ನೂ ಇದು ಸ್ಥಾಪಿಸುತ್ತದೆ.

	ರೋಗಿಗಳೊಂದಿಗೆ ತನ್ನ ಸ್ವಂತ ಅನುಭವಗಳ ಮೂಲಕ ಶೈಶವ ಲೈಂಗಿಕತೆ (ಇನ್‍ಫ್ಯಾಂಟೈಲ್ ಸೆಕ್ಸ್ಯುಯಾಲಿಟಿ) ಎಂಬ ಭಾವನೆಯ ಬಳಿಗೆ ಫ್ರಾಯ್ಡ್ ಬಂದ. ಇದು ಶೈಶವದ ಎಳೆಯ ವಯಸ್ಸುಗಳಲ್ಲಿ ಕಂಡುಬರುವ ಸ್ವರತಿಯ ಚಟುವಟಿಕೆಗಳನ್ನು ಕುರಿತುದಾಗಿದೆ. ಇವನ್ನೆಲ್ಲ ಫ್ರಾಯ್ಡ್ ನಿರುದ್ಧ ಶೈಶವ ಲೈಂಗಿಕತ್ವ ಎಂಬ ಮಾತಿನಲ್ಲಿ ಒಟ್ಟುಗೂಡಿಸಿದ್ದಾನೆ.

	ಫ್ರಾಯ್ಡ್ ಒತ್ತಿ ಹೇಳಿದ ಮತ್ತೊಂದು ಸಂಗತಿ ಎಂದರೆ ಸುಪ್ತಚೇತನಕ್ಕೆ ಕನಸುಗಳೇ ಹೆದ್ದಾರಿ ಎಂಬುದು. ಕನಸುಗಳು ಮಾನವನ ಸುಪ್ತ ಬಯಕೆಗಳನ್ನು ತೃಪ್ತಿಪಡಿಸುವ ಸಂಗತಿಗಳು ಎಂದು ಮೊತ್ತ ಮೊದಲು ಹೇಳಿದವನು ಫ್ರಾಯ್ಡ್. ಜಾಗ್ರದಾವಸ್ಥೆಯಲ್ಲಿ ಅದುಮಿಟ್ಟ ಆಸೆಗಳೇ ಕನಸುಗಳಲ್ಲಿ ಸಫಲವಾಗುವಂಥವು.

	ಫ್ರಾಯ್ಡ್‍ನ ಅಭಿಪ್ರಾಯದ ಪ್ರಕಾರ ವಿರುದ್ಧ ಶೈಶವ ಲೈಂಗಿಕತೆಯಲ್ಲಿ ಒಂದು ಲಘುಮನೋರೋಗ ಪ್ರಾದುರ್ಭವಿಸುತ್ತದೆ. ಫ್ರಾಯ್ಡ್‍ನಿಗೆ ಸ್ವಯಂವಿರೋಧೋಕ್ತಿಗಳನ್ನು ಕಂಡರೆ ಇಷ್ಟ. ಉದಾಹರಣೆಗೆ ಯಾವುದು ನಿಷಿದ್ಧವೂ ಅದರ ಮೇಲೆಯೇ ಆಸೆ ನಮಗೆ. ಜನರು ಏನನ್ನಾದರು ಮಾಡಲು ತುಂಬ ಇಷ್ಟಪಡದಿದ್ದರೆ ನ್ಯಾಯಶಾಸ್ತ್ರವಾಗಲಿ ಸಂಪ್ರದಾಯವಾಗಲಿ ಅದನ್ನು ನಿಷೇಧಿಸಲು ಹೋಗುತ್ತಿರಲಿಲ್ಲ. ಈತನ ಅಭಿಪ್ರಾಯದಲ್ಲಿ ಅಂಜಿಕೆಗಳು ಕೂಡ ಇಚ್ಛೆಯ ಮೊಗವಾಡಗಳು. ಇದೇ ರೀತಿಯಲ್ಲಿ ಯಾವನಾದರೂ ಒಬ್ಬ ವ್ಯಕ್ತಿಯ ಯೋಗಕ್ಷೇಮದ ವಿಚಾರದಲ್ಲಿ ತುಂಬ ಆತಂಕಪಡುವಿಕೆ ನಿಜವಾಗಿ ಆತನನ್ನು ಘಾತಿಸುವ ಬಯಕೆಯೇ ಆಗಿರಬಹುದು.

	ಈ ರೀತಿಯಾಗಿ ಕ್ರಮಕ್ರಮೇಣ ಫ್ರಾಯ್ಡ್ ತನ್ನ ಸಿದ್ಧಾಂತವನ್ನು ರೂಢಿಸಿದ. ಇದರಲ್ಲಿ ಈತ ವಿಶದಪಡಿಸಬಯಸಿದ ಸಂಗತಿಯೆಂದರೆ ಮಾನವನಲ್ಲಿ ವಿಚಾರವೂ ಸಂಯುಕ್ತಿಕವಾದ ವಿವೇಚನೆಯೂ ಪ್ರಧಾನವಾಗಿಲ್ಲ. ಬುದ್ಧಿಯೊಂದು ಆಳು ಅದರಲ್ಲೂ ಲಂಚಕೋರ ದಾಸ. ಪ್ರಬಲರಾದ ಪ್ರಭುಗಳಿಗೆ ಹಿತವನ್ನು ಮಾಡುವ ಉದ್ದೇಶದಿಂದ ಇದು ಸತ್ಯವನ್ನು ತಿರುಚಿ, ಅಡಗಿಸಿ ತಿರುಗುಮುರುಗು ಮಾಡುವುದಕ್ಕೆ ಹೇಸುವುದಿಲ್ಲ. ರಾಗಗಳ ಅಗತ್ಯದಿಂದಲೇ ವಿವೇಚನಾಶಕ್ತಿ ಯಾವಾಗಲೂ ಪ್ರವರ್ತಿಸುತ್ತದೆ. ಮುಂದೆ ಫ್ರಾಯ್ಡ್ ತನ್ನ ಸಿದ್ಧಾಂತವನ್ನು ಸಮಾಜ ಮತ್ತು ನಾಗರಿಕತೆಯ ವರ್ತನೆಗಳಿಗೆ ಅನ್ವಯಿಸಿದ. ಪುರಾಣಕಥೆಗಳು, ಧಾರ್ಮಿಕಕ್ರಿಯೆ, ನಿಷೇಧಗಳು ಮತ್ತು ಸಾಮಾಜಿಕ ಸಂಸ್ಥೆಗಳು ಇವುಗಳ ಮೂಲಕ ಲೈಂಗಿಕ ಬಯಕೆಗಳು ಸಂತೃಪ್ತವಾಗುವುದನ್ನು ಈತ ಕಂಡುಕೊಂಡ. ಅವುಗಳೊಳಗಿನ ಕ್ರಿಯಾಭಾಗಗಳು ಸುಪ್ತಚೇತನದಲ್ಲಿ ರೂಢಮೂಲವಾಗಿವೆಯೆಂದೂ ಭಾವಸೇಚಿತವಾಗಿವೆಯೆಂದೂ ಫ್ರಾಯ್ಡ್ ಹೇಳುತ್ತಾನೆ.

	ಫ್ರಾಯ್ಡ್‍ನಿಗೆ ಅನೇಕ ಜನ ಅನುಯಾಯಿಗಳು ಇದ್ದರು. ಆರಂಭದಲ್ಲಿ ಇವನ ಸಿದ್ಧಾಂತಗಳನ್ನು ಆಸಕ್ತಿಯಿಂದ ಕಂಡ ಜನ ಕಾಲ ಕಳೆದ ಹಾಗೆಲ್ಲ ಇವನ ವಾದಗಳನ್ನು ಒಪ್ಪಲಿಲ್ಲ. ಅವರು ಕೆಲವು ಸಲ ಇವನೊಡನೆ ಜಗಳವನ್ನೂ ಆಡಿ ಕೊನೆಗೆ ಫ್ರಾಯ್ಡ್‍ನನ್ನು ಬಿಟ್ಟು ಹೊರಟುಹೋದರು. ಕೆಲವರಂತೂ ಫ್ರಾಯ್ಡ್‍ನನ್ನು ಅಶ್ಲೀಲ ಸಾಹಿತ್ಯ ನಿರ್ಮಾಪಕ ಯೆಹೂದ್ಯ ಎಂದು ಕರೆಯುತ್ತಿದ್ದರು. ತನ್ನ ಸ್ವಸ್ಥಳದಲ್ಲಿ ಅಪಹಾಸ್ಯಕ್ಕಿಡಾಗಿ ಮೂಲೆಗುಂಪಾಗಿದ್ದರೂ ಫ್ರಾಯ್ಡ್ ಹಾಗೂ ಈತನ ವಿಚಾರಗಳು ಬೇರೆಕಡೆಗಳಲ್ಲಿ ಬೇರೂರಿ ಬೆಳೆದುವು. ಫ್ರಾಯ್ಡ್‍ನ ಅತ್ಯಂತ ಉತ್ಸಾಹಿ ಅನುಯಾಯಿಗಳ ಪೈಕಿ ಕಾರ್ಲ್‍ಯಾಂಗ್ ಅತ್ಯಂತ ಪ್ರಸಿದ್ಧನಾಗಿದ್ದಾನೆ.

	ಎರಡನೆಯ ಮಹಾಯುದ್ಧ ಆರಂಭವಾದಾಗ ನಾಟ್ಸಿಗಳು ಯೆಹೂದ್ಯರನ್ನು ಹಿಂಸಿಸತೊಡಗಿದರು. ಆಗ ಫ್ರಾಯ್ಡನ ಸ್ನೇಹಿತರು ಇವನಿಗೆ ವಿಯನ್ನ ಬಿಟ್ಟುಬೇರೆ ದೇಶಕ್ಕೆ ಹೊರಡುವಂತೆ ಮುನ್ನೆಚ್ಚರಿಕೆ ಕೊಟ್ಟರು. ಆದರೆ ಈತ ಅದಕ್ಕೆ ಕಿವಿಗೊಡಲಿಲ್ಲ. ಇದರ ದುಷ್ಪರಿಣಾಮವೆಂದರೆ ಮುಂದೆ ಜರ್ಮನರು ಈತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು. ಈತನ ಮಗನ ಪ್ರಕಟನಾಲಯವನ್ನು ಸುಟ್ಟರು. ಅದರೊಂದಿಗೆ ಈತನ ಪುಸ್ತಕಗಳೂ ಸುಟ್ಟಹೋದುವು. ಫ್ರಾಯ್ಡ್ ನಾಟ್ಸಿಗಳಿಂದ ಗೃಹಬಂಧಿತನಾದ. ಬಿಡುಗಡೆಗಾಗಿ ಬಯಸಿದಾಗ ಬಿಡುಗಡೆಯ ದಂಡವನ್ನು ಈತನ ಮೇಲೆ ಹೇರಿದರು. ಫ್ರಾಯ್ಡ್ ದಂಡವನ್ನು ತೆರುವ ಸ್ಥಿತಿಯಲ್ಲಿರಲಿಲ್ಲ. ಅದೃಷ್ಟವಶಾತ್, ಹಿಂದೆ ಈತನಲ್ಲಿ ಚಿಕಿತ್ಸೆಯನ್ನು ಪಡೆದಿದ್ದ ಗ್ರೀಕ್ ರಾಜಕುಮಾರಿಯೊಬ್ಬಳು 2,50,000 ಷಿಲ್ಲಿಂಗ್ಸ್ ತೆರಿಗೆ ಹಣ ಕೊಟ್ಟು ಇವನನ್ನು ಬಿಡಿಸಲು ಮುಂದೆ ಬಂದಳು. ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್ ಸರ ವಾಷಿಂಗ್‍ಟನ್ನಿನಲ್ಲಿದ್ದ ಜರ್ಮನ್ ರಾಯಭಾರಿಯನ್ನು ಫ್ರಾಯ್ಡ್‍ನ ಬಿಡುಗಡೆ ಮಾಡಲು ಕೋರಿಕೊಂಡ. ಫ್ರಾಯ್ಡ್‍ನಿಗೆ ಇಂಗ್ಲೆಂಡಿಗೆ ಹೋಗಲು ಅನುಮತಿ ದೊರೆಯಿತು. ಆ ವೇಳೆಗಾಗಲೆ ಫ್ರಾಯ್ಡ್ ಕೆಳದವಡೆಯ ಆರ್ಬುದ ರೋಗಕ್ಕೆ ತುತ್ತಾಗಿದ್ದ. ಇಂಗ್ಲೆಂಡಿನಲ್ಲಿ ಇವನ ಕೆಲವು ಸ್ನೇಹಿತರು ಇವನಿಗೊಂದು ಮನೆ ಕೊಂಡುಕೊಟ್ಟರು. ಅಲ್ಲಿ ಈತ ಕೇವಲ ಮೂರು ವಾರಗಳ ಕಾಲವಿದ್ದು 1939 ಸೆಪ್ಟೆಂಬರ್ 23ರಂದು ತನ್ನ 82ನೆಯ ವಯಸ್ಸಿನಲ್ಲಿ ತೀರಿಕೊಂಡ.

	ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಫ್ರಾಯ್ಡ್ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ದಿ ಇಂಡರ್ ಪ್ರಿಟೇಷನ್ ಆಫ್ ಡ್ರೀಮ್ಸ್ (1899), ತ್ರೀ ಎಸ್ಸೇಸ್ ಆನ್ ದಿ ತಿಯರಿ ಆಫ್ ಸೆಕ್ಸ್ಯುಯಾಲಿಟಿ (1905), ದಿ ಆರಿಜನ್ ಅಂಡ್ ಡೆವಲಪ್‍ಮೆಂಟ್ ಆಫ್ ಸೈಕೋ ಅನಾಲಿಸಿಸ್ (1910). ದಿ ಟೊಟೆಮ್ ಅಂಡ್ ಟ್ಯಾಬು (1913)-ಇವು ಇವನ ಮುಖ್ಯ ಕೃತಿಗಳು.
(ಎ.ಎಚ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ